ಸೋಮವಾರ, ಫೆಬ್ರವರಿ 14, 2011

ಪ್ರೇಮಕ್ಕೂ ಹೊಸ ಭಾಷ್ಯ!!!??


ಪ್ರೇಮಕ್ಕೆ ಹೊಸ ಭಾಷ್ಯ ಬರುತ್ತಿದೆ
ಹೌದು! ನಿಜಕ್ಕೂ ಇದು ಬೇಕಿತ್ತ?
ಬೇಡವಾದುದಕ್ಕೆಲ್ಲ ಬಾಯಿ ಬಡಿಯುವ ಮಂದಿ
ಅಂಗಳದಲ್ಲಿ ನಿಂತು ಗುಲ್ಲೆಬ್ಬಿಸಲಿಲ್ಲ
ವಿರೋಧಿಸುವುದಿರಲಿ ಒಮ್ಮೆ ನಿಂತು ಸೋಲ್ಲೆತ್ತಲಿಲ್ಲವಂತೆ

ಈ ಹೊಸದರೊಳಗೆ ನವಿರಿಲ್ಲ
ಎದೆಯ ಬಡಿತ ಕೇಳಿಸುವ ಸುಳಿವಿಲ್ಲ
ಕೇಳಿದಾಕ್ಷಣ ಒಳಗಿವಿಯ ನಿಮಿರಿಸುವುದಿಲ್ಲ
ಕಂಗೆಟ್ಟು ಗದ್ದಕ್ಕೆ ಕೈ ಓತು ಯೋಚಿಸುವಂತಿಲ್ಲ
ಇಲ್ಲಿ ಎಲ್ಲಾ ನೇರಾ ನೆರವಂತೆ

ಇಲ್ಲಿ ದಿವಸಗಳು ಮುನಿತು ನಿಲ್ಲುವುದಿಲ್ಲ
ಮಾತಿಗಾಗಿ ಎದುರು ನಿಂತಾಗ ತಡಬಡಿಸುವಂತಿಲ್ಲ
ಕಣ್ಣುಗಳು ಕಲೆತಾಗ ತಲೆ ತಗ್ಗಿಸಿ ನೆಲ ಕೆರೆಯುವಂತಿಲ್ಲ
ಮಂದಹಾಸದಿಂದ ನಿಂತು ಚಂದಿರನನ್ನೂ ಆಸ್ವಾದಿಸುವಂತಿಲ್ಲ
ಇಲ್ಲೆಲ್ಲಾ ಬರೀ ನಾಲಗೆಯದ್ದೆ ಸರ್ವಾಧಿಕಾರವಂತೆ

ಇಲ್ಲಿ ಪ್ರೇಮಕ್ಕೆ ಹೊಸ ಭಾಷ್ಯ ನೀಡಿದ್ದಾರೆ
ದಿಡೀರನೆ ಸಂಜೆ ಮಬ್ಬಲ್ಲಿ ಬಸ್ಸಿಡಿದು ಹೊರಡುವಂತಹ ದಾವಂತ
ಫ್ರೆಷರನ್ನು ಏರಿಸಿದ ಕುಕ್ಕರಿನೊಳಗಣ ಒತ್ತಡದಂತೆ
ಇಲ್ಲಿ ಯಾವುದಕ್ಕೂ ಸಮಯವಿಲ್ಲ ಬರೀ ವೇಗವಿದೆ
ಎಲ್ಲವೂ ಒಂದೇ ದಿನದಲ್ಲಾಗಬೇಕಂತೆ
ಅದಕ್ಕೆಂದೇ ಪ್ರೇಮಿಗಳಿಗೂ ಒಂದು ದಿನ ಗುರುತು ಮಾಡಿದ್ದಾರಂತೆ
ಪ್ರೇಮಕ್ಕು ಹೊಸ ಭಾಷ್ಯ ಬರೆದಿದ್ದಾರಂತೆ.........

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ