ಬುಧವಾರ, ಡಿಸೆಂಬರ್ 14, 2011

ಜೀತದಾಳು



ಜೀತದಾಳು

ಮನದ ತುಂಬಾ ಹಬ್ಬದ ಸಡಗರ
ಕನಸುಗಳ ಕೇಕೆಯ ಕನವರಿಕೆ 
ಒಲವು ಉತ್ಸಾಹದಿಂದ ಇಮ್ಮಡಿಯಾಗುತ್ತಿದೆ 
ನನಗಾದರೋ ಇನ್ನಿಲ್ಲದ ದಾವಂತ ದಿಗಿಲು 
ಏಕೆಂದರೆ ನಾ ಒಲವಿನ ಜೀತದಾಳಲ್ಲವೇ?
 
ಪರಸ್ಪರ ಚಂದದ ಒಗ್ಗೂಡುವಿಕೆ 
ಮಾತು ಮನಗಳ ವಿನಿಮಯ
ಬಿಸಿಯುಸಿರಿನ ಶಾಖದ ಅನಾವರಣ 
ನನಗಾದರೋ ಕೊಂಚ ಹೆಚ್ಚೇ ಬಿಸಿ ಅನುಭವ
ಏಕೆಂದರೆ ನಾ ಆ ಮನದ ಜೀತದಾಳಲ್ಲವೇ? 
 
ಕ್ಷಣ ನಿನ್ನ ಕಾಣದಿದ್ದರೂ ತೊಳಲಾಟ 
ಹಸಿವು ನೀರಡಿಕೆಯೂ ನೆನಪಾಗುವುದಿಲ್ಲ 
ಬರೀ ವಿರಹದಸಿವ ಅಟ್ಟಹಾಸ 
ಆದರೂ ಕೆಲವೊಮ್ಮೆ ಆ ವಿರಹದಸಿವನ್ನೂ ಆನಂದಿಸುತ್ತೇನೆ
ಏಕೆಂದರೆ ನಾ ಆ ಹಸಿವಿನ ಜೀತದಾಳಲ್ಲವೇ?
 
ಜಗತ್ತಿನ ಸುಖವೆಲ್ಲಾ ನನಗಿರಲೆಂಬ ಸ್ವಾರ್ಥ 
ಈ ಪ್ರೇಮದ ನಡುವೆ ಮತ್ತಾರೂ ಇರದಿರಲೆನ್ನುವ ಭಾವ
ಕಪ್ಪನೆಯ ದೇಹದೊಳಗೆ ಅಚ್ಛ ಬಿಳುಪಿನ ಮನಸು 
ಅಚ್ಚಳಿಯದೆ ಸ್ವಚ್ಛವಾಗಿ ನನ್ನೊಳಗೆಯೇ ಇರಲೆಂಬ ಬಯಕೆ 
ಏಕೆಂದರೆ ನಾ ಆ ಬಿಳಿ ಮನಸಿನ ಜೀತದಾಳಲ್ಲವೇ?
 
ಈ ಪ್ರೀತಿಯೊಳಗೆ ನೋವಿಗೆ ಜಾಗವಿಲ್ಲ 
ಒಲವ ವಾರಿಧಿಗೆ ಕೊನೆಯೇ ಇಲ್ಲ 
ಯುಗಯುಗಗಳೇ ಕಳೆದರೂ ನಿರಂತರ ಹರಿದಾಟ
ಆದರೂ ನನಗೇಕೋ ಇದರೊಳಗೆ ಸಣ್ಣನೆಯ ನಡುಕ ಪುಳಕ
ಏಕೆಂದರೆ ನಾ ಆ ಪ್ರೀತಿಯ ಜೀತದಾಳಲ್ಲವೇ? 

- ಶಶಿಭಾಗ್ಯಜ ...