ಬುಧವಾರ, ಡಿಸೆಂಬರ್ 14, 2011

ಜೀತದಾಳು



ಜೀತದಾಳು

ಮನದ ತುಂಬಾ ಹಬ್ಬದ ಸಡಗರ
ಕನಸುಗಳ ಕೇಕೆಯ ಕನವರಿಕೆ 
ಒಲವು ಉತ್ಸಾಹದಿಂದ ಇಮ್ಮಡಿಯಾಗುತ್ತಿದೆ 
ನನಗಾದರೋ ಇನ್ನಿಲ್ಲದ ದಾವಂತ ದಿಗಿಲು 
ಏಕೆಂದರೆ ನಾ ಒಲವಿನ ಜೀತದಾಳಲ್ಲವೇ?
 
ಪರಸ್ಪರ ಚಂದದ ಒಗ್ಗೂಡುವಿಕೆ 
ಮಾತು ಮನಗಳ ವಿನಿಮಯ
ಬಿಸಿಯುಸಿರಿನ ಶಾಖದ ಅನಾವರಣ 
ನನಗಾದರೋ ಕೊಂಚ ಹೆಚ್ಚೇ ಬಿಸಿ ಅನುಭವ
ಏಕೆಂದರೆ ನಾ ಆ ಮನದ ಜೀತದಾಳಲ್ಲವೇ? 
 
ಕ್ಷಣ ನಿನ್ನ ಕಾಣದಿದ್ದರೂ ತೊಳಲಾಟ 
ಹಸಿವು ನೀರಡಿಕೆಯೂ ನೆನಪಾಗುವುದಿಲ್ಲ 
ಬರೀ ವಿರಹದಸಿವ ಅಟ್ಟಹಾಸ 
ಆದರೂ ಕೆಲವೊಮ್ಮೆ ಆ ವಿರಹದಸಿವನ್ನೂ ಆನಂದಿಸುತ್ತೇನೆ
ಏಕೆಂದರೆ ನಾ ಆ ಹಸಿವಿನ ಜೀತದಾಳಲ್ಲವೇ?
 
ಜಗತ್ತಿನ ಸುಖವೆಲ್ಲಾ ನನಗಿರಲೆಂಬ ಸ್ವಾರ್ಥ 
ಈ ಪ್ರೇಮದ ನಡುವೆ ಮತ್ತಾರೂ ಇರದಿರಲೆನ್ನುವ ಭಾವ
ಕಪ್ಪನೆಯ ದೇಹದೊಳಗೆ ಅಚ್ಛ ಬಿಳುಪಿನ ಮನಸು 
ಅಚ್ಚಳಿಯದೆ ಸ್ವಚ್ಛವಾಗಿ ನನ್ನೊಳಗೆಯೇ ಇರಲೆಂಬ ಬಯಕೆ 
ಏಕೆಂದರೆ ನಾ ಆ ಬಿಳಿ ಮನಸಿನ ಜೀತದಾಳಲ್ಲವೇ?
 
ಈ ಪ್ರೀತಿಯೊಳಗೆ ನೋವಿಗೆ ಜಾಗವಿಲ್ಲ 
ಒಲವ ವಾರಿಧಿಗೆ ಕೊನೆಯೇ ಇಲ್ಲ 
ಯುಗಯುಗಗಳೇ ಕಳೆದರೂ ನಿರಂತರ ಹರಿದಾಟ
ಆದರೂ ನನಗೇಕೋ ಇದರೊಳಗೆ ಸಣ್ಣನೆಯ ನಡುಕ ಪುಳಕ
ಏಕೆಂದರೆ ನಾ ಆ ಪ್ರೀತಿಯ ಜೀತದಾಳಲ್ಲವೇ? 

- ಶಶಿಭಾಗ್ಯಜ ...

ಮಂಗಳವಾರ, ಮೇ 3, 2011



ಸ್ನೇಹ - ಪ್ರೀತಿ 

ಏನೆಂದು ಹೇಳಲಿ ಗೆಳತಿ 
 ನಿನ್ನೆ ಕೆಳಿದ್ದನೊಬ್ಬ ಗೆಳೆಯ 
ಪ್ರೀತಿಗೂ ಸ್ನೇಹಕ್ಕೂ ವ್ಯತ್ಯಾಸವೇನೆಂದು
 ಯಾವುದು ಮೇಲೆಂದು ಉತ್ತರಿಸು ನೀ ಎಂದಿದ್ದ

 ಪ್ರೇಮ ಮಗ್ಗಲ ಮುಳ್ಳಂತೆ 
 ಪ್ರತಿ ಕದಲುವಿಕೆಗು ಚುಚ್ಚುವುದಂತೆ 
ಪ್ರೀತಿ ಇಲ್ಲದಿದ್ದರೆ ಬದುಕು ಸುಮವಿಲ್ಲದ ವನವಂತೆ 
 ಆದರೂ ಪ್ರೇಮ ಸದಾ ಚುಚ್ಚುವುದಂತೆ 

 ಸ್ನೇಹ ಕಲ್ಪವೃಕ್ಷವಂತೆ 
ಬಯಸಿದ್ದೆಲ್ಲವ ಬಿಡದೆ ನೀಡುವುದಂತೆ 
ಮನಕ್ಕೆ ಮಧುರವಾದ ಸುರ ಸೋಪಾನವಂತೆ 
 ಸ್ನೇಹವೆಂಬುದು ಎರಡು ಕೈಗಳ ಚಾಪ್ಪಳೆಯಂತೆ
 ತಟ್ಟುತ್ತಿರುವವರೆಗೂ ಮನವ ಹಿತವಾಗಿ ತಟ್ಟುವುದಂತೆ

 ನೀನಾದರು ಹೇಳು ಗೆಳತಿನಿಜ ಯಾವುದೆಂದು
 ಪ್ರೀತಿ ಚುಚ್ಚುವುದ ಇಲ್ಲ ಸ್ನೇಹ ತಟ್ಟುವುದ 
 ನೆನ್ನೆಯಿಂದ ಉತ್ತರ ಸಿಕ್ಕಿಲ್ಲ ನನಗೆ
 ಪ್ರಶ್ನೆ ಚುಚ್ಚಿ ಚುಚ್ಚಿ ತಟ್ಟುತ್ತಿರುವುದು ಮಾತ್ರ ನಿಜ 
ಬಗೆಹರಿಸೆಯ ನೀ ಈ ಮನೋಕ್ಲೆಷೆಯ

- ಶಶಿಭಾಗ್ಯಜ ...

ಶುಕ್ರವಾರ, ಏಪ್ರಿಲ್ 29, 2011



ಹಳಿಯದಿರಿ... 

ಇದೀಗ ನಿಮ್ಮ ನೂಕಿ ಹೋದಳಲ್ಲ ಗೆಳೆಯ 
ಅವಳನ್ನು ಮಾತಲ್ಲಿ ಹಳಿಯುವುದ ನಿಲ್ಲಿಸಿರಿ 
ನಿನಗೆ ಸಾದ್ಯವಾದರೆ ಅವಳಿಗಿಂತ ಮುಂದೆ ಸಾಗು 
ಆದರೆ ಮತ್ತೆ ಅವಳ ಮುಂದೆಯೇ ಸಾಗಬೇಡ 
ನಿನ್ನ ಹಿಂದೆಯು ಬಯಸಿಬರುತ್ತಿರಬಹುದು ಹಲವರು
 ಮತ್ತೊಬ್ಬರ ಹಿಂದೆ ನೀ ಸಾಗುವುದು ಇಷ್ಟವಿಲ್ಲ ನನಗೆ 
ಉಕ್ಕೇರುವ ಒಲವ ಸಾಗರದಲೆಗಳು ಎಲ್ಲರೊಳಗೂ ಇರುತ್ತವೆ

ಯಾರೂ ಮತ್ತೊಬ್ಬರ ಅವಲಂಬಿಸಿರುವುದಿಲ್ಲ 
 ಅವಲಂಬಿಸಿರುವುದ ಕಂಡರೆ ಅವಮಾನಿಸುತ್ತಾರೆ
 ಜೀವನದ ಪಯಣದಲ್ಲಿ ಎಲ್ಲವೂ ಇರುತ್ತದೆ 
ಸ್ನೇಹ, ಪ್ರೀತಿ, ಮಮತೆ, ತರ್ಕಗಳೆಲ್ಲ ಮೈಲಿಗಲ್ಲುಗಳೇ
 ನಿಧಾನಕ್ಕೆ ಸವೆಸಿ ಹಿಂದೆಹಾಕಬೇಕಿದೆ ಒಂದೊಂದನ್ನೇ
 ಕಣ್ಣಿಗೆ ಕಾಣುವಂತಿದ್ದರು ಕೆಲವ ಹುಡುಕಬೇಕಿದೆ 
ಕೆಲವು ಮಾತ್ರ ಇದ್ದೂ ಇಲ್ಲದಂತೆ ಕಾಣಬಹುದು
 ಕೆಲವರು ಮಾತ್ರ ಕಾಣದಂತೆ ಹುದುಗಿಸಿಕೊಂಡಿರಬಹುದು 
 ಅದಕ್ಕಾಗೆ ನಿಮ್ಮ ತಳ್ಳಿಹೋದವಳ ಹಳಿಯದಿರಿ 
ಯಾರೊಬ್ಬರು ಮುಂದೆ ನಿಮ್ಮ ನೂಕಿ ಹೋಗದಂತೆ ನಡೆಯುತ್ತಿರಿ...

                                              - ಶಶಿಭಾಗ್ಯಜ ...

ಶುಕ್ರವಾರ, ಏಪ್ರಿಲ್ 15, 2011

ಸುಖವಾಗಿರಲಿ ನನ್ನೊಲವು...



ಸುಖವಾಗಿರಲಿ ನನ್ನೊಲವು...

ಒಲವ ಸುತ್ತ ಸುತ್ತಿಕೊಂಡಿದ್ದ 
 ಸುರುಳಿ ಇದೀಗ ಬಿಚ್ಚಿಕೊಳ್ಳುತಿದೆ
 ಮನದೊಳಗೆಲ್ಲ ಬರೀ ಅದೇ ಸುದ್ದಿ 
 ಒಂದು ಕ್ಷಣ ಏಕಾಂತವಾದರು 
 ತಂತಾನೇ ಎದೆ ಝಲ್ ಎನ್ನುತ್ತದೆ 
 ಹೊತ್ತು ಕಳೆದಂತೆಲ್ಲ ಆತಂಕ ಹೆಚ್ಚಾಗುತ್ತಿದೆ

 ನಾ ಮಾರ್ಧನಿಸದೆ ಅಳುತ್ತಿರುವ ಸದ್ದು 
 ನನ್ನವಳ ಕರ್ಣವ ಇನ್ನೂ ತಾಕಲಿಲ್ಲವೇನೋ
 ತಾಕಿದರು ತಾನೆ ಅವಳಾದರು ಏನ ಮಾಡಾಳು 
ಬಿಡುವಿಲ್ಲ ಈಗವಳಿಗೆ ಯಾವುದನ್ನೂ ನೆನೆಸಿಕೊಳ್ಳಲು
 ನಿದ್ರೆಯಲ್ಲೂ ನಗುವೆಂಬುದು ಮರೆತೋಗಿದೆ ನನಗೆ

 ಅಟ್ಟಹಾಸಗೈಯ್ಯುತ್ತಿವೆ ರಾಕ್ಷಸೀ ಮನಸ್ಥಿತಿಗಳು 
 ಪ್ರೇಮಕ್ಕೆ ಬೆಟ್ಟದಂತೆ ಅಚಲ ಅಡ್ಡವಾಗಿದ್ದವರೆಲ್ಲ 
ಇಂದು ಸಮುದ್ರದಂತೆ ಚಲನೆ ತೆಗೆದುಕೊಂಡಿದ್ದಾರೆ
 ನನ್ನೊಲವ ಹಡಗ ಮುಳುಗಿಸಲು
 ಎತ್ತ ಸಾಗಿದರತ್ತ ನೀರ್ಗಡ್ಡೆಗಳಾಗಿ ನಿಂತಿದ್ದಾರೆ

 ಸುಖವಾಗಿರಲಿ ನನ್ನೊಲವು ನಾಳೆ ಹಸೆ ಏರಿದ ನಂತರ 
 ನಾನವಳ ಮರೆಯುವುದಿಲ್ಲ 
 ಮರೆತು ಮಂದಹಾಸಗೈಯುವುದಿಲ್ಲ 
 ಅವಳ ಹೆಸರಲ್ಲಿ ಕವಿತೆ ಕಟ್ಟುತ್ತೇನೆ, 
 ನನ್ನೊಳಗಿನ ಕನವರಿಕೆಗಳಿಗೆ ಜೀವ ನೀಡುತ್ತೇನೆ
 ಮರೆಯಾದ ನನ್ನೊಲವ ಸೇರಲು ದಾರಿ ಹುಡುಕುತ್ತೇನೆ 
 ಮರುಜನ್ಮದಲ್ಲಿಯಾದರು ಸರಿ
 ಒಲವ ಉಳಿಸಿಕೊಡೆಂದು ಒಲವನ್ನೊಮ್ಮೆ ಪ್ರಾರ್ಥಿಸುತ್ತೇನೆ 
- ಶಶಿಭಾಗ್ಯಜ ...

ಶನಿವಾರ, ಏಪ್ರಿಲ್ 9, 2011

ಬಾ ಗೆಳತಿ...



ಬಾ ಗೆಳತಿ...


ಬಾ ಗೆಳತಿ ನನ್ನೊಲವಿನ ರಥಕ್ಕೆ ಸಾರಥಿಯಾಗು 
 ಸರಿಪಥದಲ್ಲಿ ಸರಿಯಾಗಿ ಸಾಗಿಸು ಬಾ 
 ಈ ಜೀವನ ರಣರಂಗದ ದಾರಿ ಬಲು ಕಠಿಣ 
 ನೂರೆಂಟು ಅಡೆ ತಡೆ ಭೀಕರ ಬಯಲಿದು 

 ನಾನೇನು ಅರ್ಜುನನಲ್ಲ ಹೆದರಿ ಕೂರುವುದಿಲ್ಲ
 ನೀನೇನು ಶ್ರೀಕ್ರಿಷ್ಣನಾಗಿ ಉಪದೆಶವೀಯಬೇಕಿಲ್ಲ 
 ಪ್ರತಿ ಆಪತ್ತುಗಳಲ್ಲಿ ನನ್ನನ್ನ ಕಾಪಾಡಬೇಕಿಲ್ಲ 
ನಾನೇ ಹೋರಾಡಿ ಕೊನೆವರೆಗೆ ಕೊಂಡೊಯ್ಯುವೆ 

 ಜೀವನದಲಿ ನಾ ರಣ ಹೇಡಿಯಲ್ಲ 
 ಗುರುಹಿರಿಯರನ್ನ ಕದನಕ್ಕೆಳೆಯುವುದಿಲ್ಲ
 ನೀನೇನು ಕುಟಿಲೋಪಾಯದಿಂದ ಗೆಲ್ಲಿಸಬೇಕಿಲ್ಲ 
ಯಾರನ್ನು ಸಾಯಿಸುವ ಮನಸ್ಸು ನನಗಿಲ್ಲ 

 ನೀನೇನು ರಾಜ್ಯಲಕ್ಷ್ಮಿಯಲ್ಲ 
ಹಿಂದೆ ಮತ್ತಿನ್ನಾರಿಗೋ ಕಳೆದುಕೊಂಡಿಲ್ಲ 
 ಗೆದ್ದು ಮತ್ತಿನ್ನಾರಿಗೋ ಧಾರೆಯರೆಯಬೇಕಿಲ್ಲ 
ಯಾರ ಮೇಲು ದ್ವೇಷ ಸೇಡ0ತು ಇಲ್ಲವೇ ಇಲ್ಲ

 ನಾನೇನು ಸ್ವಾರ್ಥಿಯಲ್ಲ 
ಸಶರೀರನಾಗಿಯೇ ಸ್ವರ್ಗವ ತಲುಪಬೇಕಿಲ್ಲ
 ದೇವತೆಗಳ ಜತೆ ಆಸನವ ಹಂಚಿಕೊಳ್ಳಬೇಕಿಲ್ಲ 
ನನಗೇನು ಸಿಗದಿದ್ದನ್ನು ಸಾಧಿಸುವ ಛಲವಿಲ್ಲ 

 ಜೀವನದಲ್ಲಿ ನಾ ಮಹತ್ತರವಾದುದ ಬಯಸುವುದಿಲ್ಲ 
ಕಂಡದ್ದನ್ನೆಲ್ಲ ದಕ್ಕಿಸಿಕೊಳ್ಳುವ ಹಂಬಲವಿಲ್ಲ 
ನಿನ್ನ ಹೊರತು ಮತ್ತಿನ್ನಾರಿಗೋ ಇನಿಯನಾಗುವುದಿಲ್ಲ 
 ಬೇಗ ಬಂದು ಈ ಜೀವನ ರಥವ ಕೂಡಿಕೊಳ್ಳುವೆಯಲ್ಲ 

- ಶಶಿಭಾಗ್ಯಜ ...

ಶುಕ್ರವಾರ, ಏಪ್ರಿಲ್ 1, 2011

ಅಸ್ತು ಎಂದರೆ ಸಾಕು..



ಅಸ್ತು ಎಂದರೆ ಸಾಕು... 

ನೀನೊಮ್ಮೆ ಅಸ್ತು ಎಂದರೆ ಸಾಕು
  ನಾ ಅಸ್ತಂಗತನಾಗುವೆ ಗೆಳತಿ

 ಮರಳುಗಾಡಿನ ಮರಳ ಮೇಲೆ ನಿನ್ನೆಸರಾಗುವೆ 
 ನೀ ಬೇಡವೆಂದು ಬಿರುಗಾಳಿಯಾಗಿ 
ಒಮ್ಮೆ ನೀ ಅಸ್ತು ಎಂದರೆ ಸಾಕು 
ನಿನ್ನ ಧಾಳಿಗೆ ಸಿಲುಕಿ ಅಸ್ತಂಗತನಾಗುವೆ 

 ಕಡಲೊಳಗೆ ಅಲೆಯಾಗುವೆ 
 ಕುಪ್ಪಳಿಸಿ ಬಂದು ದಡವಾದ ನಿನ್ನನ್ನಪ್ಪಳಿಸುವೆ 
ನಿನಗೆ ಬೇಡವೆನಿಸಿ ಅಸ್ತು ಎಂದರೆ ಸಾಕು 
ಮತ್ತೆ ಹಿಂದುರಿಗಿ ವಾರಿದಿಯೊಳಗೆ ಅಸ್ತಂಗತನಾಗುವೆ

 ನಿನ್ನ ಬೆಳಗುವ ರವಿಯಾಗುವೆ 
 ಹಗಲೆಲ್ಲ ಭುವಿಯಾದ ನಿನ್ನ ಸನಿಹದಲ್ಲಿರುವೆ 
 ನೀ ನಿಷೆಯ ಇಚ್ಚಿಸಿ ಅಸ್ತು ಎಂದರೆ 
ಸಾಕು ಬಾನ ಮೂಲೆಗೆ ಸರಿದು ಅಸ್ತಂಗತನಾಗುವೆ 

ಅಲ್ಲೆಲ್ಲ ಅಸ್ತಂಗತನಾಗುವುದು ಕ್ಷಣಿಕವೇ ನಿಜ 
 ಏಕೆಂದರೆ ಮತ್ತೆ ಮತ್ತೆ ನಿನ್ನಿಂದ ಅಸ್ತು ಎನ್ನಿಸಿಕೊಳ್ಳಬಯಸುವೆ 
ಅದಕಾಗೆ ನೀ ಅಸ್ತು ಎಂದರೆ ಸಾಕು 
 ಅಸ್ತಂಗತನಾದರು ಬಿಡದೆ ಮತ್ತೆ ಮತ್ತೆ ಬರುವೆ 

 ಆದರೆ 
ಈ ಜೀವನವಿದೆಯಲ್ಲ ಗೆಳತಿ 
 ಇಲ್ಲಿ ಅಸ್ತಂಗತನಾಗಲಿಕ್ಕಾಗುವುದು ಒಂದೆ ಬಾರಿ 
 ಇಲ್ಲೂ ನಾ ನಿನಗೆ ಬೇಸರವೆನಿಸಿ ನೀ ಅಸ್ತು ಎನ್ನುವುದಾದರೆ 
 ನಾ ನಿನ್ನಿಂದ ಅಸ್ತಂಗತನಾಗುವೆ ಮರಳಿ ಬರದೆ 
 ಮರಳಿ ಬಾರದೆ......... 


ಶಶಿಭಾಗ್ಯಜ ...

ಮಂಗಳವಾರ, ಮಾರ್ಚ್ 29, 2011

ಸನಿಹ



ಸನಿಹ... 

ನಾನೆಂದು ಅಂಜುತ್ತಿದ್ದೆ 
 ನಿನ್ನ ಕಾಣಲು, ಒಮ್ಮೆ ಸ್ಪರ್ಶಿಸಲು
 ಹಾಗಿತ್ತು ನಿನ್ನ ಬಿಸಿ ಸನಿಹ 
 ಏಕೆಂದರೆ ನೀ ಕಾಡುವ ಕಣ್ಣೀರಾಗಿದ್ದೆ 

 ನಾನೆಂದು ಹೆದರುತ್ತಿದ್ದೆ 
 ನಿನ್ನೊಂದಿಗೆ ಮಾತನಾಡಲು 
 ಹಾಗಿತ್ತು ನಿನ್ನ ಮೌನ 
 ಏಕೆಂದರೆ ನೀ ನಿನ್ನ ವಿರಹವನ್ನೆಲ್ಲ ಕಣ್ಣಲ್ಲೇ ಸೂಸುತ್ತಿದ್ದೆ 

 ನಾನೆಂದು ಬೆಚ್ಚುತ್ತಿದ್ದೆ 
 ನಿನ್ನನ್ನೊಮ್ಮೆ ಕನಸಿನಲ್ಲಿ ಸಂದಿಸಲು 
 ನೀ ದೂರಾಗುವೆಯೇನೋ ಎಂದು ಭ್ರಮಿಸುತಿದ್ದೆ 
 ಆದರೆ ನೀ ಆ ಕತ್ತಲಲ್ಲೂ ನನ್ನ ಭ್ರಮೆಗಳ ಬೆತ್ತಲಾಗಿಸಿದೆ 

- ಶಶಿಭಾಗ್ಯಜ ...

ಸೋಮವಾರ, ಮಾರ್ಚ್ 28, 2011

ಹಂಬಲ



ಹಂಬಲ.. 
ನನ್ನವಳಿಗೆ ಸದಾ 
 ನನ್ನೊಳಗೊಂದಾಗುವ ಹಂಬಲ 

 ಮುಗಿಲೊಳಗೆ ಹನಿಯಾಗಿ 
 ಸಮಯ ಸಿಕ್ಕಾಗಲೆಲ್ಲ 
 ನಾನೆಂಬ ಭುವಿಯ ಸೇರುವ ಹಂಬಲ

 ನಭದೊಳು ನಕ್ಷತ್ರವಾದರೂ 
 ಉಲ್ಕೆಯಾಗಿ ಸಿಡಿದು ಬಂದು 
 ನನ್ನ ಮುತ್ತಿಕ್ಕುವ ಹಂಬಲ 

 ಭೋರ್ಗರೆದು ಮೊರೆವ ಕಡಲಾದರು
 ಅಲೆ ಅಲೆಯಾಗಿ ಅಪ್ಪಳಿಸಿ
 ದಡವಾದ ನನ್ನನ್ನೊಮ್ಮೆ ತಾಕುವ ಹಂಬಲ 

 ಕಣ್ಣಲ್ಲಿ ಬೀಳುವ ಕಣ್ಣೀರಾದರು 
ಕರಗಿಹೋಗುವ ಮುನ್ನ 
 ನನ್ನ ಕೆನ್ನೆಯ ಮೇಲೆಯೇ ಹರಿವ ಹಂಬಲ 

 ನಾನು ನಿಜಕ್ಕೂ ಅದೃಷ್ಟವಂತ
 ಏಕೆಂದರೆ ಬೇರೆಲ್ಲೂ ಕಾಣೆ 
 ಯಾರಲ್ಲೂ ನನ್ನವಳಿಗಿರುವಂತಹ ಹಂಬಲ

- ಶಶಿಭಾಗ್ಯಜ ...

ಸೋಮವಾರ, ಮಾರ್ಚ್ 21, 2011

ಒಬ್ಬಂಟಿ ನಾನು



ಒಬ್ಬಂಟಿ ನಾನು ..


ಹೇ ಸಾವೆ 
ನಿನಗೂ ಪ್ರಿಯನಾದನೆ 
 ನನ್ನ ಪ್ರಿಯಕರ 

 ಅಥವಾ
 ನಮ್ಮ ಪ್ರೇಮವ ಕಂಡು ಸಹಿಸಲಾರದಾದೆಯ
 ನಮ್ಮ ನೋಡಿ ನಿನಗೂ ಹಲುಬುವಂತಾಯಿತೆನು

 ಒಂದು ಕ್ಷಣ ನೀ ಸುಮ್ಮನಿದ್ದರೆ ಸಾಕಿತ್ತು 
ಸಾಗರದಾಚೆಯಾದರೂ ಹೋಗಿ ಬದುಕುತ್ತಿದ್ದೆವು
 ಸಾವಿಲ್ಲದೂರ ಸೇರಿಕೊಳ್ಳುತ್ತಿದ್ದೆವು

 ಈಗ ಎಲ್ಲವೂ ಮುಗಿಯಿತು 
 ಹೇ ಜವರಾಯ ನನ್ನ ಕಣ್ಣೀರಿಗೂ ಕರಗಲಾರೆಯ
 ನನ್ನವನ ನನಗೆ ತಿರುಗಿ ನೀಡಲಾರೆಯ 

 ಏನು ಕೊಡಲಾರೆಯೇನು 
ಸಂತೋಷವೆ ನಿನಗೆ ಈಗ ಒಬ್ಬಂಟಿ ನಾನು 
 ಈಗ ನಿನಗೆ ನಿನ್ನಾಸೆ ತಣಿಯಿತೆನು 

ಆಯಿತು ನಾನೂ ನನ್ನವನ ಸೇರುವೆ ಬಿಡು
 ನನ್ನಿನಿಯನಿಲ್ಲದಿದ್ದಲ್ಲಿ ನನಗಾದರೂ ಕೆಲಸವೇನು 
 ನಾನೂ ನಿನ್ನೂರಿಗೆ ಬರುವೆ 
 ನನ್ನವನ ಜೊತೆಗೊಂದಿಷ್ಟು ಜಾಗ ನೀಡು........ 


- ಶಶಿಭಾಗ್ಯಜ ...

ಶುಕ್ರವಾರ, ಮಾರ್ಚ್ 18, 2011

ಕಥೆ ಹೇಳುತ್ತಿವೆ ಕುರುಡು ಕಣ್ಣುಗಳು

ಗೆಳೆಯರೆ ಇದು ಭೋಪಾಲ್ ಅನಿಲ ದುರಂತದ ಬಗೆಗಿನ ತೀರ್ಪು ಬಂದಾಗ ಬರೆದ ಕವನ ಆದರೆ ಮತ್ತೆ ಜಪಾನಿನಲ್ಲಿ ಅಂತದ್ದೇ ಒಂದು ದುರಂತ ನಡೆದು ಜನರ ಜೀವನ ಅಸ್ತವ್ಯಸ್ತ ವಾಗಿದೆ ಅದಕ್ಕಾಗಿ ಇದನ್ನು ಈಗ ತಮ್ಮಗಳ ಮುಂದೆ ಇಡುತ್ತಿದ್ದೇನೆ ಧನ್ಯವಾದಗಳು


<

 ನಿರಂತರ ನಡೆಯುತ್ತಿದೆ ಪಯಣ 
 ಕನಸುಗಳೇ ಇಲ್ಲದ ಕವಲು ದಾರಿಗಳಲ್ಲಿ 
 ಪ್ರತಿ ಹೆಜ್ಜೆಯು ಪ್ರತಿದ್ವನಿಸುತ್ತಿದೆ 
ಈ ಬದುಕು ಘೋರ ಘೋರ........ 


 ಇಂದೋ ನಾಳೆಯೋ ನಾಳಿದ್ದೋ ಸುಧಾರಿಸಬಹುದ 
ಕವಲೊಡೆದ ಬದುಕುಗಳು ಕಣ್ತೆರೆಯಬಹುದ 
ವರುಷಗಳಿಂದ ಆರ್ತಿಸುತ್ತಿರುವ ನೋವಿನ ನರಳಾಟ 
ಮುಂದಾದರು ಅಂತ್ಯದೆಡೆಗೆ ತೆರಳಬಹುದಾ....? 


 ಅಗಣಿತ ಕನಸುಗಳು ಅಜೀವಗೊಂಡಿವೆ 
 ಹೊಸ ಕನಸಕಾಣಲು ಕಣ್ಣುಗಳೇ ಇಲ್ಲವಾಗಿವೆ 
 ಸಾಂತ್ವಾನ ಹೇಳುವ ಮನಸ್ಸುಗಲಿಲ್ಲ 
 ಕೈ ಹಿಡಿದು ಮುನ್ನಡೆಸಲು ಮತ್ತೊಂದು ಕರವಿಲ್ಲ 


 ಮುಂದಣ ಹೆಜ್ಜೆ ಇಡಲು ಮನಸ್ಸಿಲ್ಲ 
 ಇರುವ ಕಾಲುಗಳಲ್ಲಿ ಬಲವಿಲ್ಲ 
 ಪ್ರತಿಯೊಂದು ಮುನ್ನಡೆಗಳಿಗೂ ನೆರವು ಬೇಕಿದೆ 
ಆಸರೆಗಾಗಿ ಪ್ರತಿಕ್ಷಣ ಅಂಗಲಾಚುವಂತಾಗಿದೆ 


 ನೋಡೀಗ ನನ್ನ ಮನಸ್ಸು ನನ್ನ ಮಾತೆ ಕೇಳುತ್ತಿಲ್ಲ 
 ನೀ ಹಾಡಿದ ಮಾತ ಕೇಳುವ ಭಾಗ್ಯವಂತು ಇಲ್ಲ 
ಅಸ್ವಸ್ತತೆಯ ಹಾದಿಯಲ್ಲಿ ನಿರಂತರ ಹೋರಾಟ 
 ಮಾನಸಿಕ ದೌರ್ಬಲ್ಯದ ಎರಕ ಮೂರ್ತಿಯಾದೆ ನಾ 


 ಹೌದು ಇಲ್ಲಿ ನಿರಂತರ ಕಥೆ ಹೇಳುತ್ತಿವೆ 
 ನಾಳಿನ ಜಗವ ನೋಡಲಾಗದ ಕುರುಡು ಕಣ್ಣುಗಳು 
ನೋಡಿದವರೆದೆಯಲ್ಲಿ ಚಪ್ಪಾಳೆ ಬಡಿಯುತ್ತಿವೆ 
 ಇಂಚು ಸರಿಸಲಾಗದ ನನ್ನ ಕೈಗಳು 


 ಮನಸ್ಸಿರುವವರ ಮನಸ್ಸಿನಮೇಲೆ ದಾವಂತದ ಹೆಜ್ಜೆ ಹಿಡುತ್ತಿವೆ 
ಮುಂದಡಿಯಿಡಲಾಗದ ನನ್ನ ಕಾಲುಗಳು 
 ಕೂಗಿ ಕೂಗಿ ನಿನ್ನ ಕರೆಯುತ್ತಿವೆ 
 ದಶಕಗಳಿಂದ ಒಂದೇ ಒಂದು ಶಬ್ದ ಹೊರಡಿಸದ ನಾಲಗೆ 


ಇಲ್ಲ ಕ್ಷಮಿಸುವುದಿಲ್ಲ 
ನಿನ್ನ ಇಂಥ ಘೋರವೆಸಗಿದ ಕಾಲವೇ ನಿನ್ನ 
 ನಿನ್ನತ್ತ ಬೇಗ ಕರೆದುಕೊಳ್ಳದ ಅಂತ್ಯವೆ ನಿನ್ನ 


 ಇಲ್ಲ ಮನ್ನಿಸುವುದಿಲ್ಲ 
ನಿನ್ನ ಜಗವನಾಳುವ ದೊರೆತನವೆ ನಿನ್ನ 
ಬಂಡವಾಳಶಾಹಿತ್ವಕ್ಕೆ ಮಣೆಹಾಕುವ ನಿನ್ನ 


 ಇಲ್ಲ ಅಭಿನಂದಿಸುವುದಿಲ್ಲ ನಿನ್ನ 
 ಕಡೆಗಣಿತರಾದವರತ್ತ ಕರುಣೆ ಇಲ್ಲದ ಕಾನೂನೇ ನಿನ್ನ 
ನನ್ನ ನೊಂದ ಬದುಕಿಗೆ ನ್ಯಾಯ ದೊರಕಿಸದ ನಿನ್ನ 
 ಇಲ್ಲ ಕ್ಷಮಿಸುವುದಿಲ್ಲ......... 
ಇಲ್ಲ ಕ್ಷಮಿಸುವುದಿಲ್ಲ................

ಶಶಿಭಾಗ್ಯಜ

ಮಂಗಳವಾರ, ಮಾರ್ಚ್ 15, 2011

ಹೆದರದಿರು ನನ್ನೊಲವೆ


ಹೆದರದಿರು ನನ್ನೊಲವೆ 
 ನಾನಿರುವೆ ನೆಳಲಾಗಿ
 ಬಿಸಿಲಿಗೆ ಕೊಡೆಯಾಗಿ
 ನಿನ್ನೆದೆಯ ದೆಗೆಗೆ ತಂಪಾಗಿ
 ಬೇಸಿಗೆಗೆ ಬೀಸಣಿಗೆಯ ಗಾಳಿಯಾಗಿ
 ಗಾಳಿ ಸೃಷ್ಟಿಸುವ ಹಸಿರು ಮರವಾಗಿ

 ಹೆದರದಿರು ನನ್ನೊಲವೆ 
 ನಾನಿರುವೆ ರಕ್ಷೆಯಾಗಿ 
 ಜಗವ ನೀ ನೋಡಲು ದೃಷ್ಟಿಯಾಗಿ 
ಎಲ್ಲವೂ ನಿನ್ನರಿವಿಗೆ ಬರಲು ಸಮಷ್ಟಿಯಾಗಿ 
 ರಕ್ಷಿಸಲೆಂದೆ ಹುಟ್ಟಿದಂತಹ ರೆಪ್ಪೆಯಾಗಿ

 ಹೆದರದಿರು ನನ್ನೊಲವೆ
 ನಾನಿರುವೆ ನಿನ್ನ ಮನದ ಪ್ರತಿರೂಪವಾಗಿ
 ಕನ್ನಡಿಯೊಳಗೆ ನಿನ್ನ ಪ್ರತಿಬಿಂಬವಾಗಿ
 ನೀ ಕಾಣುವ ಕನಸುಗಳಿಗೆ ಕಣ್ಣುಗಳಾಗಿ 
ನಿನ್ನ ಬಾಳ ನೌಕೆಯ ನೂಕುವ ನಾವಿಕನಾಗಿ
 ಬಾಳ ಬಯಲೊಳಗೆ ನೀ ನಡೆವಾಗ
 ತಡವರಿಸದಿರಲು ದಾರಿಯಾಗಿ
 ನಾನಿರುವೆ ನನ್ನೊಲವೆ 
ಹೆದರದಿರು ಹೆದರದಿರು.............
ಶಶಿಭಾಗ್ಯಜ

ಗುರುವಾರ, ಮಾರ್ಚ್ 3, 2011

ನಾವು ನಾವಾಗಿದ್ದರೆ .



ನಾವು ನಾವಾಗಿದ್ದರೆ . 

ಹೌದು ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ಲಾಭ ನಷ್ಟಗಳೆಂಬ ತಖ್ತೆಗಳ
 ಸುಳಿಯೊಳಗೆ ಸಿಲುಕಿ 
 ಪ್ರೀತಿ ಪ್ರೇಮಗಳ ಮನದೊಳಗೆ ಮೆಟ್ಟಿ
 ವಿರಹದುರಿಯಲ್ಲಿ ನರಳಿ 
ನೋಡುವ ಜಗತ್ತಿಗಾಗಿ ಒಲವ 
ಆಟ ಕಟ್ಟುವ ಬದಲು 
ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ಮನ ಒಲ್ಲದ ತನುವ 
 ಬಳಸಿ ಬಸವಳಿದು 
 ನೋವ ಮರೆಮಾಚಲು 
 ರಾತ್ರಿ ಚುಕ್ಕಿಯ ನೋಡಿ ನಗುವ ಹರಿಸಿ 
 ನಾಟಕವಾಡುವ ಬದಲು 
 ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ನಮ್ಮೊಳಗೆ ನೋವ ಮುಚ್ಚಿಟ್ಟು
 ನಮಗಾಗಿಯೆ ಎಂಬ ಭ್ರಮೆಯಲ್ಲಿ 
ಹೆಂಡತಿ ಮಕ್ಕಳೆಂಬ ಒಡನಾಡಿಗಳಿಗಾಗಿ
 ಕೊನೆವರೆಗೂ ಒದ್ದಾಡಿ 
 ಕೊನೆಗೊಂದು ದಿನ ಎಲ್ಲವನ್ನೂ 
ಅವರಿಗೊಪ್ಪಿಸುವ ಬದಲು 
 ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ಕಷ್ಟ ನಷ್ಟಗಳ ಲೆಕ್ಕವಿಡದೆ 
 ಸಮಾಜದೆದುರು ನಗುನಗುತ್ತಾ
 ಒಳಗೆ ಹಸಿವಿದ್ದರು 
 ಮೇಲೆ ಸಂತೃಪ್ತಿಯ ಮುಖವಾಡ ಧರಿಸಿ 
 ಈ ಹೊರ ಜಗತ್ತಿನಲ್ಲಿ ಪುರುಷೋತ್ತಮ 
 ಎಂದೆನ್ನಿಸಿಕೊಳ್ಳಲು ಒದ್ದಾಡುವ ಬದಲಿಗೆ 
 ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ನಾಲ್ಕು ದಿನಗಳ ಜೀವನ ಯಾತ್ರೆ 
 ನಡೆಸಿದಷ್ಟೂ ದಿನ ಬರೀ ಹೋರಾಟ
 ಆಟ ಮುಗಿಸುವುದರೊಳಗೆ 
 ಇನ್ನಿಲ್ಲದ ಭಾವ ತಾಕಲಾಟ 
 ಈ ಅಶಾಶ್ವತ ಹರ-ಚರಗಳೊಳಗೆ 
ಸಿಲುಕಿ ಇನ್ನಿಲ್ಲದ ಮನ ವ್ಯಾಕುಲತೆ ತಳೆದು 
ಕೊನೆಗೊಂದು ದಿನ ಯಾನ ಮುಗಿಸುವವರೆಗೆ 
 ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 
ಅದೆಷ್ಟು ಸೊಗಸಿ ತ್ತು ........ 

- ಶಶಿಭಾಗ್ಯಜ ...

ಸೋಮವಾರ, ಫೆಬ್ರವರಿ 28, 2011

ನಿನ್ನುಸಿರ ಹೆಜ್ಜೆಗಳು



ನಿನ್ನುಸಿರ ಹೆಜ್ಜೆಗಳು .. 


ನನ್ನ ಒಳ ಜಗತ್ತಿನೋಳಗೆಲ್ಲ 
 ಬರೀ ನಿನ್ನುಸಿರ ಹೆಜ್ಜೆಗಳು
 ನಮ್ಮ ಕನಸುಗಳನ್ನೆ ಕಾವಲಿಗಿರಿಸಿ
 ನನ್ನುಸಿರ ಸಪ್ಪಳದೊಂದಿಗೆ ಲೀನವಾಗಿಹುವು


- ಶಶಿಭಾಗ್ಯಜ ...

ಗುರುವಾರ, ಫೆಬ್ರವರಿ 24, 2011

ಹ್ಯಾಂಗ ಕಳಿಸಿಕೊಡಲಿ ತಂಗ್ಯವ್ವ ನಿನ್ನ






ಹ್ಯಾಂಗ ಕಳಿಸಿಕೊಡಲಿ ತಂಗ್ಯವ್ವ ನಿನ್ನ
ಹ್ಯಾಂಗ ಕಳಿಸಿಕೊಡಲಿ ತಂಗ್ಯವ್ವ ನಿನ್ನ 
 ಒಟ್ಟಿಗೆ ಹಾಡಿ ಬೆಳೆದ ಕ್ಷಣವಿನ್ನು ಮನಸ್ಸಿನಿಂದ ಮರೆಯಾಗಿಲ್ಲ 
ಮಡಿಲಲ್ಲಿ ಮಲಗಿಸಿ ಮುದ್ದಿಸಿದ್ದಕ್ಕಿನ್ನೂ ಮರೆವಿಲ್ಲ
 ಬೆಳೆದು ನಿಂತ ನಿನ್ನ ನೋಡಿ ಸಂಭ್ರಮಿಸಿದ್ದಿನ್ನೂ ಮಾಸಿಲ್ಲ
 ಹಬ್ಬಕ್ಕ ಹೊಸ ಸೀರೆಗೆಂದು ರಚ್ಚೆ ಹಿಡಿಯುತ್ತಿದ್ದ ನಿನ್ನ ಮುಖವಿನ್ನು ಮರೆತಿಲ್ಲ ಈಗ ನಿನ್ನ ಕಳಿಸಿಕೊಡಬೇಕಂತ ಹ್ಯಾಂಗವ್ವ 
 
ಗೊತ್ತಿಲ್ಲ ಜಗದ ನಿಯಮವಂತ
 ಬೆಳೆದು ನಿಂತ ನಿನ್ನ ಮದುವಿ ಮಾಡಲೇಬೇಕಂತ 
ಅದಕ್ಕೆಂದ ವರನ ಹುಡುಕ್ಕಿದ್ದಾಗಿದೆ 
ಈಗ ಹಸೆ ಏರಿಸಿ ಅಕ್ಷತೆಯ ಹಾಕಬೇಕಿದೆ
 ಆದರು ಮದುವಿ ಮಾಡಿ ಕಲಿಸಿಕೊಡೋದು ಹ್ಯಾಂಗವ್ವ 


 ಅಣ್ಣನಾಗಿ ನಿಂತು ಮುಡಿಗ ಹೂ ತುಂಬಿ ಅಕ್ಕರೆಯಿಂದ ಧಾರೆ ಎರೆದದ್ದಾಯಿತು 
 ಊರೆಲ್ಲ ಕರೆದು ಒಮ್ಮೆಗೆ ಭೀಗಿದ್ದಾಯಿತು
 ಒಳಿಗೆ ಪಾಯಸ ಮಾಡಿ ಸವಿಯೂಟ ಹಾಕಿಸಿದ್ದಾಯಿತು
 ಚಲುವಾದ ಭಾವನ ನೋಡಿ ಮೀಸೆ ತಿರುವಿದ್ದಾಯಿತು
 ಈಗ ನಿನ್ನ ಕಳಿಸಿಕೊಡಬೇಕಂತ ತಂಗ್ಯವ್ವ 


 ಬಾಗಿಲಿಗ ಭಾವ ಬಂದು ನಿಂತ್ಯಾನ 
 ಮುತ್ತಿಕ್ಕಿ ಮುದ್ದಿನ ಕೈಗಳಿಗೆ ಬಳೆ ತೊಡಿಸಿದ ನಾನಾ
 ಅದೇ ಕೈಯಿಂದ ಬಾಗೀನ ಹ್ಯಾಂಗ ತುಂಬಲವ್ವ
 ಕೂಸು ಮರಿ ಹೊತ್ತು ಮೂಟೆಯಾಟ ಆಡಿದ ನಾನು
 ಈಗ ಕೈಯೊಡ್ಡಿ ನೀ ಹತ್ತುವ ಗಾಡಿಗ ಮೆಟ್ಟಿಲೆಂಗಾಗಲವ್ವ
 ತಂಗಿ ಹ್ಯಾಂಗ ಕಳಿಸಿಕೊಡಲವ್ವ ನಿನ್ನ


 ನನಗಿಲ್ಲಂತ ಈಗ ನಿನಮ್ಯಾಲ ಅಧಿಕಾರ 
ಭಾವನಿಗ ಅರ್ಧಾಂಗಿಯಂತ ನೀ ಇನ್ನ 
 ಅತ್ತಿ ಮಾವನಿಗ ಆಸರೆಯ ಕುಡಿಯಂತ 
 ಇಷ್ಟೂ ದಿನ ನನ್ನ ಮನೆಯ ಭಾಗ್ಯಲಕ್ಷ್ಮಿಯಾಗಿದ್ದ ನೀ ಇನ್ನ
 ಹೊಕ್ಕ ಮನೆಯ ನಂದಾದೀಪವಂತ 
ಈಗ ನಿನ್ನ ಕಳಿಸಿಕೊಡಬೇಕಂತ ತಂಗ್ಯವ್ವ 


 ಉಬ್ಬಿದಾ ಕೊರಳಿಂದ ಬಿಕ್ಕಿ ಉಕ್ಕಿ ಮಾತಾ ಬರುತ್ತಿಲ್ಲ 
ತುಂಬಿದಾ ಕಣ್ಣಿಂದ ಬಂದ ನೀರ ತೋರಗೊಡುವಂತಿಲ್ಲ 
ಮಡಿಲಿಕ್ಕಿ ಹರಿಸಿಣ ಕುಂಕುಮ ಹಚ್ಚಿ ಹಾರೈಸಬೇಕಂತ 
ಚಂದನವ ಬಳಿದು ನಿನ್ನ ಬಾಳ ಘಮಗೊಳಿಸೆಂದು ಹರಸಬೇಕಂತ 
 ಈಗ ನಿನ್ನ ಕಳಿಸಿಕೊಡಲೇಬೇಕಂತ ತಂಗ್ಯವ್ವ ನಿನ್ನ ಕಳಿಸಿಕೊಡಲೇಬೇಕಂತ..........
ಶಶಿಭಾಗ್ಯಜ

ಮಂಗಳವಾರ, ಫೆಬ್ರವರಿ 22, 2011

ನಮ್ಮ ನಾಯಕರು


ನಮ್ಮ ನಾಯಕರು

 ಹೀಗೆ ಕೆಲವು ಜನರಿರುತ್ತಾರೆ
 ಮಾತೆತ್ತಿದರೆ ಸಮಾಜ ಸುಧಾರಣೆಯ ಮಾತನಾಡುತ್ತಾರೆ
 ಸರ್ವ ಸಮಾನತೆ ಸ್ವಾತಂತ್ರ್ಯಗಳ ಘೋಷ ಮೊಳಗಿಸುತ್ತಾರೆ 
ಅತೀ ಸಾಮಾನ್ಯನಲ್ಲಿ ನಾ ಸಾಮಾನ್ಯನಾಗಿ
 ಬೆರೆಯುವೆನೆಂದು ಬಡಾಯಿ ಕೊಚ್ಚುತ್ತಾರೆ

 ಇಡೀ ವ್ಯವಸ್ಥೆಯನ್ನ ಒಮ್ಮೆಲೆ ನಿಂತು ಸಾರ ಸಗಟಾಗಿ ಹೀಗಳೆಯುತ್ತಾರೆ ರಾಜಕೀಯ ರಾಜಕಾರಿಣಿಗಳ ಮಾನ ಕಳೆಯುತ್ತಾರೆ
 ಅವರೆಂದರೆ ಆಧುನಿಕ ಹಿಟ್ಲರನ ಪ್ರತಿರೂಪವೆನ್ನುತ್ತಾರೆ
 ರಾಜಕಾರಿಣಿಗಳ ಅಧಿಕಾರ ದಾಹವ ಎತ್ತಿ ತೋರಿಸುತ್ತಾರೆ 
ಅವರು ದೇಶವನ್ನೇ ಕೊಳ್ಳೆ ಹೊಡೆವ ಖಳನಾಯಕರೆನ್ನುತ್ತಾರೆ 
ದಬ್ಬಾಳಿಕೆ ದೌರ್ಜನ್ಯಗಳಿಗೆ ಮತ್ತೊಂದು ಹೆಸರೆನ್ನುತ್ತಾರೆ
 ಇದು ಪ್ರಜಾಪ್ರಭುತ್ವ ಇಲ್ಲಿ ಎಲ್ಲರು ಸಮಾನರೆನ್ನುತ್ತಾರೆ

 ಆದರೆ..........!!!!!?

 ಅವರೂ ಸಹ ನಾನು ನಾಯಕನಾಗಬೇಕೆನ್ನುತ್ತಾರೆ
 ಬದಲಾವಣೆ ನನ್ನಿಂದಲೇ ಆಗಬೇಕೆನ್ನುತ್ತಾರೆ
 ನಾ ಹೇಳಿದಂತೆ ಹಿಂಬಾಲಕರು ಕೇಳಲಿ ಎನ್ನುತ್ತಾರೆ
 ಅವರನ್ನೊಗಳುವ ಭಟ್ಟಂಗಿಗಳನ್ನು ಆಪ್ತರನ್ನಾಗಿಸಿಕೊಳ್ಳುತ್ತಾರೆ 
ಅವರ ಜಯಘೋಷಗಳನ್ನು ಇನ್ನಿಲ್ಲದಂತೆ ಇಷ್ಟಪಡುತ್ತಾರೆ


 ಸಣ್ಣದೊಂದು ತಪ್ಪನ್ನು ಬೇರಾರಾದರು ಎತ್ತಿ ತೋರಿಸಿದ್ದಾದರೆ
 ಇನ್ನಿಲ್ಲದಂತೆ ಎಗರಿ ಚಡಪಡಿಸುತ್ತಾರೆ
 ತಪ್ಪು ಅವರದೆಂದು ತಿಳಿದ ತಕ್ಷಣ ಜಾಣ್ಮೆಯ ಮೌನ ಮೆರೆಯುತ್ತಾರೆ
 ಅವರ ಅನುಯಾಯಿಗಳಿಗೆ ಅವರದ್ದೇ ಆದ ಚೌಕಟ್ಟಾಕುತ್ತಾರೆ
 ಅವರೆಲ್ಲ ನಿರ್ಧಾರಗಳಿಗೆ ಪರಕಾಯ ಪ್ರವೇಶಿಸುತ್ತಾರೆ
 ನಾಯಕರಾಗುತ್ತಾರೆ ಸಂಘಟನೆಯ ಹೆಸರಿನಲ್ಲಿ ಸಂಘಟಿತರಾಗುತ್ತಾರೆ ಮತ್ತದೇ ಹಳೆಯ ನಾಯಕರಂತೆ ದಬ್ಬಾಳಿಕೆ ಮೆರೆಯುತ್ತಾರೆ
 ಇವರು ನಮ್ಮಗಳ ನಡುವಿನ ಸಮಾನತೆಯ ಪ್ರತಿಪಾದಕರು 
ಸುಧಾರಣೆಯ ಮಾತನ್ನಾಡುತ್ತಾರೆ..........

  
ಶಶಿಭಾಗ್ಯಜ

ಶುಕ್ರವಾರ, ಫೆಬ್ರವರಿ 18, 2011




ಕಾಡಿಗೆಯ ಚುಕ್ಕಿಯಾಗುತ್ತೇನೆ .. 

ನಿನ್ನ ಕಣ್ಣ ರೆಪ್ಪೆಯ ಪ್ರತಿ ಬಡಿತದೊಂದಿಗೆ 
 ಸವಿಯಾದ ಕಣ್ಣ ಕಜಾನೆಯೊಳಗಿಂದ
 ಮಧುವಿನ ಹನಿ ಮಂದಹಾಸದಿಂದ ಇಣುಕುತಿಹುದು


 ನನಗೂ ಬ್ರಮರವಾಗಿ ಮಕರಂದವೀರುವಾಸೆ
 ಆದರೆ ಕುಡಿವಾಗ ಈ ಕುಡಿಕೊಕ್ಕಿನಿಂದ 
ನಿನಗೆ ನೋವಾಗಬಹುದೇನೊ
 ಅದಕ್ಕೆ ಕಾಡಿಗೆಯ ಚುಕ್ಕಿಯಾಗುತ್ತೇನೆ 
 ನಿನ್ನ ಕೆಳಗಣ್ಣ ಕೆಳಗೆ ನಿಲ್ಲುತ್ತೇನೆ 
 ಮಧುಭರಿತ ಮೊಗದ ಅಂದಹೆಚ್ಚಿಸುತ್ತೇನೆ 
 ನಿನ್ನ ನಗುವಿನೊಂದಿಗೆ ಜೊತೆಯಾಗಿ ನಿಲ್ಲುತ್ತೇನೆ.... 

- ನಿನ್ನ ನಲ್ಮೆಯ ದೀಪು...