ಗುರುವಾರ, ಮಾರ್ಚ್ 3, 2011

ನಾವು ನಾವಾಗಿದ್ದರೆ .



ನಾವು ನಾವಾಗಿದ್ದರೆ . 

ಹೌದು ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ಲಾಭ ನಷ್ಟಗಳೆಂಬ ತಖ್ತೆಗಳ
 ಸುಳಿಯೊಳಗೆ ಸಿಲುಕಿ 
 ಪ್ರೀತಿ ಪ್ರೇಮಗಳ ಮನದೊಳಗೆ ಮೆಟ್ಟಿ
 ವಿರಹದುರಿಯಲ್ಲಿ ನರಳಿ 
ನೋಡುವ ಜಗತ್ತಿಗಾಗಿ ಒಲವ 
ಆಟ ಕಟ್ಟುವ ಬದಲು 
ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ಮನ ಒಲ್ಲದ ತನುವ 
 ಬಳಸಿ ಬಸವಳಿದು 
 ನೋವ ಮರೆಮಾಚಲು 
 ರಾತ್ರಿ ಚುಕ್ಕಿಯ ನೋಡಿ ನಗುವ ಹರಿಸಿ 
 ನಾಟಕವಾಡುವ ಬದಲು 
 ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ನಮ್ಮೊಳಗೆ ನೋವ ಮುಚ್ಚಿಟ್ಟು
 ನಮಗಾಗಿಯೆ ಎಂಬ ಭ್ರಮೆಯಲ್ಲಿ 
ಹೆಂಡತಿ ಮಕ್ಕಳೆಂಬ ಒಡನಾಡಿಗಳಿಗಾಗಿ
 ಕೊನೆವರೆಗೂ ಒದ್ದಾಡಿ 
 ಕೊನೆಗೊಂದು ದಿನ ಎಲ್ಲವನ್ನೂ 
ಅವರಿಗೊಪ್ಪಿಸುವ ಬದಲು 
 ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ಕಷ್ಟ ನಷ್ಟಗಳ ಲೆಕ್ಕವಿಡದೆ 
 ಸಮಾಜದೆದುರು ನಗುನಗುತ್ತಾ
 ಒಳಗೆ ಹಸಿವಿದ್ದರು 
 ಮೇಲೆ ಸಂತೃಪ್ತಿಯ ಮುಖವಾಡ ಧರಿಸಿ 
 ಈ ಹೊರ ಜಗತ್ತಿನಲ್ಲಿ ಪುರುಷೋತ್ತಮ 
 ಎಂದೆನ್ನಿಸಿಕೊಳ್ಳಲು ಒದ್ದಾಡುವ ಬದಲಿಗೆ 
 ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 

 ನಾಲ್ಕು ದಿನಗಳ ಜೀವನ ಯಾತ್ರೆ 
 ನಡೆಸಿದಷ್ಟೂ ದಿನ ಬರೀ ಹೋರಾಟ
 ಆಟ ಮುಗಿಸುವುದರೊಳಗೆ 
 ಇನ್ನಿಲ್ಲದ ಭಾವ ತಾಕಲಾಟ 
 ಈ ಅಶಾಶ್ವತ ಹರ-ಚರಗಳೊಳಗೆ 
ಸಿಲುಕಿ ಇನ್ನಿಲ್ಲದ ಮನ ವ್ಯಾಕುಲತೆ ತಳೆದು 
ಕೊನೆಗೊಂದು ದಿನ ಯಾನ ಮುಗಿಸುವವರೆಗೆ 
 ನಾವು ನಾವಾಗಿದ್ದರೆ 
 ಅದೆಷ್ಟು ಸೊಗಸಿತ್ತು 
ಅದೆಷ್ಟು ಸೊಗಸಿ ತ್ತು ........ 

- ಶಶಿಭಾಗ್ಯಜ ...

1 ಕಾಮೆಂಟ್‌: